ಸಂವಿಧಾನದ 73ನೇ ತಿದ್ದುಪಡಿ ಮಸೂದೆಯನ್ನು ಆಧರಿಸಿ ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯಿದೆ-1993ಗೆ ಅನುಗುಣವಾಗಿ ಕರ್ನಾಟಕದಲ್ಲಿ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಸಲುವಾಗಿ ಕಾಲ ಕಾಲಕ್ಕೆ ಅನೇಕ ಬದಲಾವಣೆಗಳನ್ನು ತರಲಾಗಿದ್ದು, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಹುದ್ದೆಯ ಸೃಜನೆ ಅವುಗಳಲ್ಲಿ ಮಹತ್ವದಾಗಿದೆ. ದಿನಾಂಕ 31.03.2008ರ ಸರ್ಕಾರಿ ಆದೇಶ ಸಂಖ್ಯೆ ಗ್ರಾಪಂಅ 2006ರಲ್ಲಿ ಸರ್ಕಾರವು ಗ್ರಾಮ ಪಂಚಾಯ್ತಿ ಒಂದಕ್ಕೆ ಒಂದರಂತೆ ಪಿಡಿಓ ಹುದ್ದೆಗಳನ್ನು ಸೃಜಿಸಲಾಗಿದೆ. ಅದರಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ 115 ಗ್ರಾಪಂಕ 2008 (3), ದಿ: 07.07.2009 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಜಿಲ್ಲಾವಾರು ಪಿಡಿಓ ಗಳ ನೇಮಕಾತಿ ಮಾಡಲಾಗಿದೆ.
ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕೆಳಸ್ತರದಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ ಕನಿಷ್ಠ ಪದವಿ ಪೂರೈಸಿರುವ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಪಿಡಿಓ ಗಳಾಗಿ ನೇಮಿಸಿ ಮೂಲಾಗ್ರ ಬದಲಾವಣೆ ತರಬಯಸುವ ಸಲುವಾಗಿ ಸರ್ಕಾರ ಪಿಡಿಓ ಹುದ್ದೆಗಳನ್ನು ಸೃಜಿಸಿದೆ. ಇದರ ಫಲಾವಾಗಿ ದಿನಾಂಕ 05.04.2010 ರಿಂದ ಪಿಡಿಓ ಗಳು ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರಕ್ಕೆ ಸತತವಾಗಿ ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿಗಳಿಸಲು ಶ್ರಮಸಿರುವುದು ಶ್ಲಾಘನೀಯ.
ಗ್ರಾಮ ಮಟ್ಟದಲ್ಲಿ ಸೇವೆ ಮಾಡುವುದು ಸವಾಲಿನ ಕೆಲಸವೇ ಸರಿ. ಪ್ರತಿ ನಿತ್ಯ ಒಂದಲ್ಲ ಒಂದು ಸಮಸ್ಯೆಗಳನ್ನು ಪಿಡಿಓಗಳು ಎದುರಿಸುತ್ತಿದ್ದು, ಆತ್ಮವಿಶ್ವಾಸ ಕುಸಿಯುತ್ತಿರುವಾಗ, ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ನೆರವಿಗೆ ಬಂದಿದ್ದು ನಮ್ಮ ಸಂಘ. ಕಾನೂನಾತ್ಮಕವಾಗಿ ರಚನೆಯಾದ, ಒಗ್ಗಟ್ಟಿನಿಂದ ಕಾರ್ಯನಿವರ್ಹಿಸುವ ಸಂಘಟನೆಯಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೆಂದು ಮನಗೊಂಡು “ಕರ್ನಾಟಕ ರಾಜ್ಯ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ” ಸರ್ಕಾರದಿಂದ ಮಾನ್ಯತೆ ಪಡೆದು ಕಾನೂನಾತ್ಮಕವಾಗಿ ರಚನೆಗೊಂಡಿದೆ. ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಸಮಸ್ಯೆಗೆ ಸ್ಪಂದಿಸಿ, ನಮ್ಮೆಲ್ಲರ ಹಿತಾಸಕ್ತಿ, ಒಳಿತಿಗಾಗಿ ದುಡಿಯುವುದೇ ನಮ್ಮ ಧ್ಯೇಯ”.
